ಜೀವಸಂದೀಪ್ತಿ  -
ಜೀವಿಗಳು ಹೊರಸೂಸುವ ದೃಗ್ಗೋಚರ ಬೆಳಕು (ಬಯೋಲ್ಯೂಮಿನಿಸೆನ್ಸ್). ಮಿಣುಕುಹುಳುಗಳ ಮಿನುಗುವಿಕೆ, ಸಾಗರದ ಮೇಲೆ ಕಾಣಬರುವ ಕಾಂತಿ ಹಾಗೂ ನಾಯಿಕೊಡೆಗಳ ಹೊಳಪು-ಇವು ಜೀವ ಸಂದೀಪ್ತಿಯ ನಿದರ್ಶನಗಳು. ವೈಜ್ಞಾನಿಕ ದೃಷ್ಟಿಯಲ್ಲಿ ತಾಪದೀಪ್ತಿಗೂ ಸಂದೀಪ್ತಿಗೂ ವ್ಯತ್ಯಾಸವಿದೆ. ಯಾವುದಾದರೊಂದು ಪದಾರ್ಥ ಕೆಂಗಾವಿಗೆ ಅಥವಾ ಬಿಳಿಗಾವಿಗೆ ಕಾದು ಅದರ ಪರಿಣಾಮವಾಗಿ ಬೆಳಕು ಹೊರಬಿದ್ದರೆ ಅದಕ್ಕೆ ತಾಪದೀಪ್ತಿ (ಇನ್ ಕ್ಯಾಂಡೆಸೆನ್ಸ್) ಎಂದು ಹೆಸರು. ತಾಪದೀಪ್ತಿಸುವ ಪದಾರ್ಥದಿಂದ ಹೆಚ್ಚಿನ ಮೊತ್ತದ ಉಷ್ಣ ಹೊರಬರುವುದೆಂಬುದನ್ನೂ ಪದಾರ್ಥದ ಉನ್ನತ ಉಷ್ಣತೆಯೇ ಅದರಿಂದ ಬರುವ ಬೆಳಕಿಗೆ ಕಾರಣ ಎಂಬುದನ್ನೂ ನೆನಪಿನಲ್ಲಿಡಬೇಕು. ಸಂದೀಪ್ತಿಯಲ್ಲಾದರೋ ಉಷ್ಣವಿಸರ್ಜನೆ ಆಗುವುದು ಲೆಕ್ಕಕ್ಕೆ ಸಿಕ್ಕದಷ್ಟು ಅಲ್ಪ. ಆದ್ದರಿಂದ ಸಂದೀಪ್ತಿಯನ್ನು ತಣ್ಣನೆ ಬೆಳಕು ಎಂದು ವರ್ಣಿಸಬಹುದು. ಸಂದೀಪ್ತಿಗೆ ವಿವಿಧ ಕಾರಣಗಳುಂಟು. ಪದಾರ್ಥ ವಿದ್ಯುತ್ತಿನಿಂದ ಉದ್ರೇಕಗೊಂಡು ಬೆಳಕನ್ನು ಹೊರಸೂಸಿದರೆ ಅದಕ್ಕೆ ವಿದ್ಯುತ್ಸಂದೀಪ್ತಿ (ಎಲೆಕ್ಟ್ರೋಲ್ಯೂಮಿಸೆನ್ಸ್) ಎಂದೂ ರಾಸಾಯನಿಕ ಕ್ರಿಯೆಯ ಪರಿಣಾಮವಾಗಿ ಉದ್ರೇಕಗೊಂಡು ಬೆಳಕನ್ನು ಹೊರಸೂಸಿದರೆ ಅದಕ್ಕೆ ರಸಸಂದೀಪ್ತಿ (ಕೆಮಿಲ್ಯೂಮಿಸೆನ್ಸ್) ಎಂದೂ ಬೆಳಕಿನ ರಶ್ಮಿಗಳಿಂದಲೇ ಉದ್ರೇಕಗೊಂಡು ಬೆಳಕನ್ನು ಸೂಸಿದರೆ ಅದಕ್ಕೆ ಪ್ರತಿದೀಪ್ತಿ (ಫ್ಲೂರೆಸೆನ್ಸ್) ಎಂದೂ ಹೆಸರು. ಬೆಳಕಿನಿಂದ ಉದ್ರೇಕಗೊಂಡ ಪದಾರ್ಥ ಆ ಬೆಳಕನ್ನು ನಂದಿಸಿದ ಮೇಲೂ ಕೆಲಕಾಲ ಬೆಳಕನ್ನು ಸೂಸುತ್ತಿದ್ದರೆ ಅದಕ್ಕೆ ಸ್ಫುರದೀಪ್ತಿ (ಫಾಸ್ಫರೆಸೆನ್ಸ್) ಎನ್ನುತ್ತಾರೆ. ಜೀವಿಗಳು ಸೂಸುವ ಬೆಳಕಿಗೆ ರಾಸಾಯನಿಕ ಕ್ರಿಯೆಯೇ ಆಧಾರವೆಂಬುದು ಖಚಿತವಾಗಿರುವುದರಿಂದ ಜೀವಸಂದೀಪ್ತಿಯನ್ನು ರಸಸಂದೀಪ್ತಿಯ ಒಂದು ವಿಶೇಷ ಬಗೆ ಎಂದು ಪರಿಗಣಿಸಿದರೆ ತಪ್ಪೇನ್ನಿಲ್ಲ.

	ಸಸ್ಯಗಳಲ್ಲಿ ಬ್ಯಾಕ್ಟೀರಿಯ ಮತ್ತು ಶಿಲೀಂಧ್ರಗಳನ್ನು (ಫಂಗೈ) ಬಿಟ್ಟರೆ ಬೇರೆ ಯಾವುದರಲ್ಲಿಯೂ ಜೀವಸಂದೀಪ್ತಿ ಕಂಡುಬರುವುದಿಲ್ಲ. ಬೆಳಕು ಸೂಸುವ ಬ್ಯಾಕ್ಟೀರಿಯಗಳು ಯಾವುವೂ ಮನುಷ್ಯನಿಗೆ ರೋಗಕಾರಕಗಳಲ್ಲ. ಆದರೆ ವಿವಿಧ ಕ್ರಿಮಿ ಕೀಟಗಳಿಗೆ ಅವುಗಳ ಸೋಂಕು ತಗಲುವುದುಂಟು. ಶಿಲೀಂಧ್ರಗಳಲ್ಲಿ ಜೀವಸಂದೀಪ್ತಿ ಎದ್ದು ಕಾಣುವುದು ನಾಯಿಕೊಡೆಗಳಲ್ಲಿ. ಸಸ್ಯಗಳಲ್ಲಿ ಕಾಣುವ ಜೀವಸಂದೀಪ್ತಿಗೂ ಪ್ರಾಣಿಗಳಲ್ಲಿ ಕಾಣುವ ಜೀವಸಂದೀಪ್ತಿಗೂ ಒಂದು ಮುಖ್ಯ ವ್ಯತ್ಯಾಸವುಂಟು. ಪ್ರಾಣಿಗಳಲ್ಲಿ ಸಂದೀಪ್ತಿ ಕಂಡುಬರುವುದು ಯಾವುದಾದರೊಂದು ರೀತಿಯ ಪ್ರಚೋದನೆಯ ಪರಿಣಾಮವಾಗಿ ಮಾತ್ರ. ಬ್ಯಾಕ್ಟೀರಿಯ ಮತ್ತು ಶಿಲೀಂಧ್ರಗಳಾದರೋ ಯಾವ ಪ್ರಚೋದನೆಯೂ ಇಲ್ಲದೆ ನಿರಂತರವಾಗಿ ಬೆಳಕನ್ನು ಸೂಸುತ್ತಲೇ ಇರುತ್ತವೆ. ಪ್ರಾಣಿ ರಾಜ್ಯದಲ್ಲಿ ಸುಮಾರು ನಲವತ್ತು ಬೇರೆ ಬೇರೆ ಗಣಗಳಿಗೆ (ಆರ್ಡರ್ಸ್) ಸೇರಿದ ಸಹಸ್ರಾರು ಜೀವಿಗಳಲ್ಲಿ ಇಂಥ ಸಂದೀಪ್ತಿ ಕಂಡುಬಂದಿದೆ. ಸಮುದ್ರದ ಕಾಂತಿಗೆ ಬಹುಮಟ್ಟಿಗೆ ಪ್ರೊಟೊeóÉೂೀವಗಳು ಕಾರಣ. ಇನ್ನೂ ಹೆಚ್ಚು ಬೆಳಕು ಸೂಸುವ ಸಮುದ್ರ ಜೀವಿಗಳೆಂದರೆ ಸೀಲೆಂಟರೇಟುಗಳು, ಲೋಳೆಮೀನುಗಳು ಮತ್ತು ಟೀನಾಫೊರಗಳು. ಮೃದ್ವಂಗಿಗಳಲ್ಲಿ (ಮಾಲಸ್ಕ್ಸ್). ಉದರಪಾದಿಗಳಲ್ಲಿ (ಗ್ಯಾಸ್ಟ್ರಾಪೊಡ) ಮತ್ತು ಶೀರ್ಷಪಾದಿಗಳಲ್ಲಿ (ಸೆಫಲಾಪೊಡ) ಜೀವಸಂದೀಪ್ತಿಯುಳ್ಳ ಜಾತಿಗಳು ಕಂಡುಬಂದಿವೆ. ನೂರಾರು ಬಗೆಯ ಮೀನುಗಳೂ ಬೆಳಕು ಸೂಸಬಲ್ಲವು. ಕೆಲವು ಜಾತಿಯ ಮೀನುಗಳಲ್ಲಿ ಅವು ಸೂಸುವ ಬೆಳಕು ನಿಜವಾಗಿಯೂ ಆ ಮೀನುಗಳದಲ್ಲ ; ಅವುಗಳ ಸಹಜೀವಿಗಳಾದ ಬ್ಯಾಕ್ಟೀರಿಯಗಳದು. ಭೂಮಿಯ ಮೇಲೆ ಜೀವಿಸುವ ಪ್ರಾಣಿಗಳಲ್ಲಿ ಮಿಣುಕುಹುಳು, ಕೆಲವು ಬಗೆಯ ಜೀರುಂಡೆಗಳು ಮತ್ತು ಮಣ್ಣು ಹುಳುಗಳು ಬೆಳಕು ಸೂಸುವುವು. ಕುತೂಹಲಕರವಾದ ಒಂದು ಅಂಶವೇನೆಂದರೆ, ಭೂಚರಗಳಲ್ಲಿ ಮತ್ತು ಸಮುದ್ರ ಜೀವಿಗಳಲ್ಲಿ ಬೆಳಕು ಸೂಸುವ ಬಗೆಬಗೆಯ ಜೀವಿಗಳು ಇರುವುವಾದರೂ ಸಿಹಿನೀರಿನಲ್ಲಿ ವಾಸಿಸುವ ಜೀವಿಗಳಲ್ಲಿ ಜೀವ ಸಂದೀಪ್ತಿ ಗೋಚರಿಸಿಲ್ಲ. ಮೀನುಗಳಿಗಿಂತ ಉನ್ನತಮಟ್ಟದ ಯಾವ ಪ್ರಾಣಿಯಲ್ಲೂ ಜೀವಸಂದೀಪ್ತಿ ಕಂಡುಬಂದಿಲ್ಲವೆಂಬುದು ಗಮನಿಸಬೇಕಾದ ಅಂಶ.

	ಜೀವಸಂದೀಪ್ತಿಯಿಂದ ಜೀವಿಗಳಿಗೆ ಏನು ಪ್ರಯೋಜನ ಎಂಬ ಬಗಗೆ ಖಚಿತವಾಗಿ ಹೆಚ್ಚೇನೂ ತಿಳಿದಿಲ್ಲ. ಸಮುದ್ರದ ಆಳವಾದ ಪ್ರದೇಶಗಳಲ್ಲಿ ನಿರಂತರವಾದ ಕತ್ತಲು ಆವರಿಸಿರುವುದರಿಂದ ಅಲ್ಲಿ ಜೀವಿಸುವ ಪ್ರಾಣಿಗಳ ಚಲನವಲನಕ್ಕೆ ಮತ್ತು ಒಂದನ್ನೊಂದು ಗುರುತಿಸುವುದಕ್ಕೆ ಅಗತ್ಯವಾದ ಬೆಳಕು ಜೀವಸಂದೀಪ್ತಿಯಿಂದ ಒದಗುವುದೆಂಬಂತೆ ಕಾಣುತ್ತದೆ. ಸೂರ್ಯರಶ್ಮಿ ಪ್ರವೇಶ ಮಾಡುವ ಪ್ರದೇಶಗಳಲ್ಲಿಯೂ ಬೆಳಕು ಸೂಸುವ ಜೀವಿಗಳು ಇರುವುದರಿಂದ ರಾತ್ರಿಯ ವೇಳೆ ಶತ್ರುಗಳನ್ನು ಹೆದರಿಸುವುದಕ್ಕೂ ಆಹಾರಯೋಗ್ಯ ಜೀವಿಗಳನ್ನು ಆಕರ್ಷಿಸುವುದಕ್ಕೂ ಇದು ನೆರವಾಗಬಹುದೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಈ ಅಭಿಪ್ರಾಯಗಳಿಗೆ ಇನ್ನೂ ಸಮರ್ಥನೆ ದೊರೆತಿಲ್ಲ. ಮಿಣುಕುಹುಳುಗಳು. ಲೈಂಗಿಕ ಆಕರ್ಷಣೆಗೆ ಇದನ್ನು ಬಳಸಿಕೊಳ್ಳುವುದೆಂಬುದು ಮಾತ್ರ ಖಚಿತವಾಗಿದೆ. ಮಿನುಗಿನ ಅವಧಿಯಿಂದ ಮತ್ತು ಎರಡು ಮಿನುಗುಗಳ ನಡುವಣ ಅಂತರದಿಂದ ಮಿಣುಕುಹುಳುಗಳು ಸ್ವಜಾತಿಯನ್ನು ಗುರುತಿಸಬಲ್ಲುವೆಂದು ಹೇಳಲಾಗಿದೆ. ಆದರೆ ಬ್ಯಾಕ್ಟೀರಿಯಗಳಿಗೆ ಆಗಲಿ ಸಮುದ್ರದಲ್ಲಿ ತೇಲುವ ಪ್ರೋಟೋeóÉೂೀವಗಳಿಗೆ ಆಗಲಿ ಜೀವಸಂದೀಪ್ತಿಯಿಂದ ಏನೂ ಪ್ರಯೋಜನವಿದ್ದಂತೆ ಕಾಣುವುದಿಲ್ಲ. ಆದ್ದರಿಂದ ಅದು ವಿಕಾಸದಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡಿರುವ ಒಂದು ಲಕ್ಷಣವಿರಬೇಕೆಂದು ನಂಬಲಾಗಿದೆ.

	ಜೀವಸಂದೀಪ್ತಿ ಒಂದು ಬಗೆಯ ರಾಸಾಯನಿಕ ವಿದ್ಯಮಾನವೆಂಬ ಬಗ್ಗೆ ಮೊತ್ತ ಮೊದಲ ಸುಳಿವು ದೊರೆತದ್ದು 1667 ರಲ್ಲಿ. ಬ್ಯಾಕ್ಟೀರಿಯಗಳ ಮತ್ತು ಶಿಲೀಂಧ್ರಗಳ ಜೀವಸಂದೀಪ್ತಿ ಆಕ್ಸಿಜನ್ ಅಭಾವದಿಂದ ಕುಂಠಿತವಾಗುವುದೆಂಬುದನ್ನು ರಾಬರ್ಟ್ ಬಾಯ್ಲ್ ಆ ವರ್ಷ ತೋರಿಸಿದ. ಅಲ್ಲದೆ ಜೀವಸಂದೀಪ್ತಿಗೆ ನೀರೂ ಆಗತ್ಯವೆಂಬುದನ್ನು ಡಿ ರ್ಯೂಮರ್ 1733ರಲ್ಲಿ ತೋರಿಸಿದ. ಮಿಣುಕು ಹುಳುಗಳ ಪುಚ್ಛಗಳನ್ನು ಆಯ್ದು ಒಣಗಿಸಿಟ್ಟು, ಎಷ್ಟು ದಿವಸಗಳ ಮೇಲೆಯೇ ಆಗಲಿ, ಅವನ್ನು ನೀರಿನೊಂದಿಗೆ ಅರೆದಾಗ ಬೆಳಕು ಹೊರಸೂಸುತ್ತದೆ. ಮಿಣುಕು ಹುಳು ಉತ್ಪತ್ತಿ ಮಾಡುವ ಯಾವುದೇ ರಾಸಾಯನಿಕ ಪದಾರ್ಥಗಳು ಜೀವ ಸಂದೀಪ್ತಿಗೆ ಕಾರಣವೆಂಬುದೂ ಜೀವಂತ ಮಿಣುಕುಹುಳು ಅದಕ್ಕೆ ಅಗತ್ಯವಿಲ್ಲವೆಂಬುದೂ ಇದರಿಂದ ವ್ಯಕ್ತವಾಗುತ್ತದೆ. ಜೀವಸಂದೀಪ್ತಿಯನ್ನು ಉಂಟು ಮಾಡುವ ಪದಾರ್ಥಗಳಲ್ಲಿ ಲೂಸಿಫೆರಿನ್ ಮತ್ತು ಲೂಸಿಫೆರೇಸ್ ಎಂಬ ಎರಡು ಅಂಶಗಳಿರುವುವೆಂಬುದನ್ನು ಆರ್. ಡೂಬ್ವ ಎಂಬ ವಿಜ್ಞಾನಿ 1887ರಲ್ಲಿ ತೋರಿಸಿದ. ಈ ಎರಡರಲ್ಲಿ ಲೂಸಿಫೆರೇಸ್ ಎಂಬುದು ನೀರಿನಲ್ಲಿ ಕುದಿಸಿದಾಗ ನಾಶವಾಗಿಬಿಡುತ್ತದೆ. ಅದು ಸ್ವಭಾವತಃ ಒಂದು ಎನ್‍ಜೈಮ್. ಅದರ ಕ್ರಿಯಾವರ್ಧಕ ನೆರವಿನಿಂದ ಲೂಸಿಫೆರಿನ್ ಎಂಬುದು ವಾಯುಮಂಡಲದ ಆಕ್ಸಿಜನ್ನನ್ನು ಉಪಯೋಗಿಸಿಕೊಂಡು ಉತ್ಕರ್ಷಣ ಹೊಂದುವುದು. ಇದರ ಪರಿಣಾಮವೇ ಜೀವ ಸಂದಿಪ್ತಿ. ಚಿಪ್ಪುಜೀವಿಯೊಂದರಿಂದ ಪ್ರತ್ಯೇಕಿಸಿದ ಲೂಸಿಫೆರಿನ್ನನ್ನು ಈ ರೀತಿ ಉತ್ಕರ್ಷಣಕ್ಕೆ ಗುರಿಮಾಡಿ ಸಂದೀಪ್ತಿ ನಂದಿಹೋದ ಬಳಿಕ ಹೈಡ್ರೋಜನ್ ಒದಗಿಸಬಲ್ಲ ಕೆಲವು ಅಪಕರ್ಷಣಕಾರಿಗಳಿಂದ ಅದನ್ನು ಸಂಸ್ಕರಿಸಿದರೆ ಲೂಸಿಫೆರಿನ್ ಪುನಃ ಉತ್ಪತ್ತಿಯಾಗುವುದೆಂಬುದನ್ನೂ ಅದು ಲೂಸಿಫೆರೇಸ್ ಮತ್ತು ಆಕ್ಸಿಜನ್ನುಗಳ ನೆರವಿನಿಂದ ಪುನಃ ಸಂದೀಪ್ತಿಯನ್ನು ಉಂಟುಮಾಡಬಲ್ಲುದೆಂಬುದನ್ನೂ ಇ.ನ್ಯೂಟನ್ ಹಾರ್ವೆ 1918ರಲ್ಲಿ ತೋರಿಸಿದ. ಆದರೆ ಈ ರೀತಿ ಲೂಸಿಫೆರಿನ್ನಿನ ಪುನರುತ್ಪಾದನೆ ಪದೇ ಪದೇ ಅನೇಕ ಬಾರಿ ನಡೆದರೆ ಪುನಃ ಅಪಕರ್ಷಿಸಲಾಗದ ಒಂದು ಉತ್ಕರ್ಷಣೋತ್ಪನ್ನ ಉಂಟಾಗುವಂತೆ ಕಂಡುಬರುತ್ತದೆ. ಒಂದೊಂದು ಜಾತಿಯ ಜೀವಿಗೂ ವಿಶಿಷ್ಟವಾದ ಲೂಸಿಫೆರಿನ್ ಮತ್ತು ಲೂಸಿಫೆರೇಸುಗಳಿರುತ್ತವೆ. ಯಾವುದೇ ಜೀವಿ ಉತ್ಪತ್ತಿ ಮಾಡುವ ಲೂಸಿಫೆರಿನ್ನನ್ನು ಆ ಜೀವಿಗೆ ಸಂಬಂಧವಿಲ್ಲದ ಅಥವಾ ದೂರಸಂಬಂಧದ ಜೀವಿಯೊಂದರಿಂದ ಪಡೆದ ಲೂಸಿಫೆರೇಸಿನ ಸಹಾಯದಿಂದ ಉತ್ಕರ್ಷಿಸುವುದು ಸಾಮಾನ್ಯವಾಗಿ ಸಾಧ್ಯವಾಗುವುದಿಲ್ಲ ವಿವಿಧ ಜೀವಿಗಳಿಂದ ಪಡೆದ ಲೂಸಿಫೆರಿನ್ನುಗಳನ್ನು ರಸಾಯನವಿಜ್ಞಾನಿಗಳು ಪರೀಕ್ಷಿಸಿ. ಅವುಗಳಲ್ಲಿ ಅನೇಕ ಲೂಸಿಫೆರಿನ್ನುಗಳ ರಾಸಾಯನಿಕ ರಚನೆಯನ್ನು ನಿಷ್ಕರ್ಷ ಮಾಡಿದ್ದಾರೆ. ಉದಾಹರಣೆಗೆ, ಸಿಪ್ರಿಡೀನ ಎಂಬ ಚಿಪ್ಪುಜೀವಿಯಿಂದ ಪಡೆದ ಲೂಸಿಫೆರಿನ್ನಿನ ರಚನೆಯನ್ನು ಮುಂದಿನ ಪುಟದಲ್ಲಿ ಕೊಟ್ಟಿದೆ.

	ಜೀವಸಂದೀಪ್ತಿಯನ್ನು ತಣ್ಣನೆಯ ಬೆಳಕು ಎಂದು ವರ್ಣಿಸುವರಾದರೂ ಅದರಲ್ಲೂ ಉಷ್ಣ ಉತ್ಪತ್ತಿಯಾಗದೆ ಇಲ್ಲ. ಆದರೆ, ಉತ್ಪತ್ತಿಯಾಗುವ ಉಷ್ಣದ ಪ್ರಮಾಣ ಅತ್ಯಲ್ಪ. ಜೀವಸಂದೀಪ್ತಿಯ ಪರಿಣಾಮವಾಗಿ ಜೀವಿಯ ಉಷ್ಣತೆ ಸುಮಾರು 0.001( ಅ ಯಷ್ಟು ಏರುವುದೆಂದು ಅಂದಾಜು ಮಾಡಲಾಗಿದೆ. ಜೀವ ಸಂದೀಪ್ತಿಯ ರೋಹಿತಗಳನ್ನು ಪರೀಕ್ಷಿಸಿದರೆ, ಪಟ್ಟೆಗಳು ಬೇರೆ ಬೇರೆ ಜೀವಿಗಳಲ್ಲಿ ಬೇರೆ ಬೇರೆ ಸ್ಥಾನಗಳಲ್ಲಿರುತ್ತವೆ. ಆದ್ದರಿಂದಲೇ ಕೆಲವು ಜೀವಿಗಳು ನೀಲಿಬೆಳಕನ್ನು ಚೆಲ್ಲಿದರೆ ಇನ್ನೂ ಕೆಲವು ಹಸಿರು ಬೆಳಕನ್ನು ಬೀರುತ್ತವೆ. ಮತ್ತೆ ಕೆಲವು ಕೆಂಪು ಬೆಳಕನ್ನು ಸೂಸುತ್ತವೆ. ಅಷ್ಟನ್ನು ಬಿಟ್ಟರೆ ಸಾಮಾನ್ಯ ಬೆಳಕಿಗೂ ಜೀವ ಸಂದೀಪ್ತಿಯ ಬೆಳಕಿಗೂ ಬೇರೆ ಯಾವ ವ್ಯತ್ಯಾಸವೂ ಇರುವುದಿಲ್ಲ. 

ಚಿತ್ರ-1

ಎರಡನೆಯ ಮಹಾಯುದ್ಧದಲ್ಲಿ ಒಣಗಿದ ಸಿಪ್ರಿಡಿನ ಎಂಬ ಚಿಪ್ಪು ಜೀವಿಗಳನ್ನು ಜಪಾನೀಯರು, ಯುದ್ಧಭೂಮಿಯಲ್ಲಿ ಬೆಳಕಿನ ಆಕರವಾಗಿ ಬಳಸುತ್ತಿದ್ದರು. ಅಂಗೈಯಲ್ಲಿ ಒಂದೆರಡು ಸಿಪ್ರಿಡೀನಗಳನ್ನು ತೀಡಿ ಪುಡಿಮಾಡಿ ಉಗುಳಿನೊಂದಿಗೆ ಅದನ್ನು ರಂಗೊಳಿಸಿದರೆ ಭೂಪಟಗಳನ್ನು ಪರೀಕ್ಷಿಸುವುದಕ್ಕೆ ಮತ್ತು ಸಂದೇಶಗಳನ್ನು ಓದುವುದಕ್ಕೆ ಸಾಕಾಗುವಷ್ಟು ಬೆಳಕು ದೊರೆಯುತ್ತಿತ್ತು ; ಆದರೆ ಆ ಬೆಳಕು ಶತ್ರುಗಳ ಲಕ್ಷ್ಯ ಸೆಳೆಯುತ್ತಿರಲಿಲ್ಲ. ಲಘುವಾದ ಬೆಳಕು ಬೇಕೆನಿಸುವಲ್ಲಿ ಕೊಠಡಿಗಳನ್ನು ಬೆಳಗಲು ಜೀವಸಂದೀಪ್ತಿಯನ್ನು ಉಪಯೋಗಿಸಿಕೊಳ್ಳಬಹುದೆಂದು ಸೂಚನೆ ಅನೇಕ ವೇಳೆ ಕೇಳಿಬಂದಿದೆ. ಆಕ್ಸಿಜನ್ ಕ್ಯಾಲ್ಸಿಯಮ್, ಂಖಿP ಮುಂತಾದ ರಾಸಾಯನಿಕಗಳನ್ನು ಗುರುತಿಸಲು ಜೀವಸಂದೀಪ್ತಿಯನ್ನು ಉಪಯೋಗಿಸುತ್ತಿದ್ದರೆ. ಬ್ಯಾಕ್ಟೀರಿಯಗಳನ್ನು ಎಣಿಸುವುದಕ್ಕೂ ಅದನ್ನು ಬಳಸಿದ್ದಾರೆ. ಪರಿಸರದ ಮಲಿನಕಾರಿಗಳನ್ನು ಗುರುತಿಸಲು ಕೂಡ ಇದನ್ನು ಬಳಸಿಕೊಂಡಿರುವ ವರದಿಗಳು ಬಂದಿವೆ.
(ಜೆ.ಆರ್.ಎಲ್.)

	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ